ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆದಿರುವ ಸಹಾಯಕ ಅಭಿಯಂತರರ (ಗ್ರೇಡ್-1) ಹುದ್ದೆಗಳ ನೇಮಕಾತಿಯಲ್ಲಿ ಬೃಹತ್ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಆರ್‌ಡಿಪಿಆರ್ ಸಚಿವರೂ ಹಾಗೂ ಹಾಲಿ ಗೃಹ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ 10 ನೇರ ಪ್ರಶ್ನೆಗಳನ್ನು ಕೇಳಿ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ 'ಜೆಪಿ ಭವನ'ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, "ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಎಂದು ನೆಪ ಹೇಳಿಕೊಂಡು ಕಳೆದ ಒಂದೂವರೆ ವರ್ಷದಿಂದ ಪ್ರಕರಣವನ್ನು ಇತ್ಯರ್ಥಪಡಿಸದೆ ಮುಂದೂಡಲಾಗುತ್ತಿದೆ. ಜಗತ್ತಿನ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮದೇ ಇಲಾಖೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಮಾಹಿತಿ ಇಲ್ಲವೇ?" ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ಕೇಳಿದ 10 ಪ್ರಮುಖ ಪ್ರಶ್ನೆಗಳು:
ನಿಮ್ಮ ಗಮನಕ್ಕೆ ಬಾರದೇ ಅಕ್ರಮ ಮಾರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆಯೇ?.
ಈ ಪ್ರಕರಣ ರಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ ಎಂಬ ವಿಷಯ ನಿಮಗೆ ತಿಳಿದಿರಲಿಲ್ಲವೇ?.
ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಇದ್ದರೂ ನಾನು ನಿಮ್ಮ ರಾಜೀನಾಮೆ ಕೇಳಬಾರದೇ?.
ಸಹಾಯಕ ಅಭಿಯಂತರರ ನೇಮಕಾತಿ ಅಕ್ರಮದ ಬಗ್ಗೆ ಮಾಹಿತಿ ಇಲ್ಲದಿದ್ದರೆ ತನಿಖೆಗೆ ಏಕೆ ಆದೇಶಿಸಲಿಲ್ಲ?.
ಅಕ್ರಮ ಎಸಗಿದ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕಾತಿ ಆದೇಶ ನೀಡಿದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?.
ನೇಮಕಾತಿ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾರಣಕ್ಕಾಗಿಯೇ ಷರತ್ತುಬದ್ಧ ಆದೇಶ ಪತ್ರ ನೀಡಿದ್ದಲ್ಲವೇ?
ಅಕ್ರಮ ನಡೆದಿರುವ ಬಗ್ಗೆ ಹಲವು ದಾಖಲೆಗಳಿದ್ದರೂ ತರಾತುರಿಯಲ್ಲಿ ನೇಮಕಾತಿ ಆದೇಶ ನೀಡಿದ್ದೇಕೆ?
ಇಲಾಖೆಯಿಂದ ಅಪರಾಧಿ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಿದ ವಿಷಯ ಸಚಿವರಾಗಿ ನಿಮಗೆ ಗೊತ್ತಿರಲಿಲ್ಲವೇ?
ಮಹಿಳಾ ಅಧಿಕಾರಿ ವರ್ಗಾವಣೆಯಾದ ತಕ್ಷಣ ಬಂದ ಹೊಸ ಅಧಿಕಾರಿ ಅಕ್ರಮದ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ದಿನವೇ ನೇಮಕಾತಿ ಆದೇಶ ನೀಡಿದ್ದೇಕೆ?.
ರೆಸಾರ್ಟ್‌ನಲ್ಲಿ ಓಎಂಆರ್ ಶೀಟ್ ತಿದ್ದಿಸಿದ ಅಧಿಕಾರಿಯೊಂದಿಗೆ ನಿಮಗೆ ಸಂಬಂಧವಿಲ್ಲವೇ?.
ರೆಸಾರ್ಟ್‌ನಲ್ಲಿ ಪರೀಕ್ಷೆ ಬರೆಸಿದ ಆರೋಪ: ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ, ಬಸ್‌ಗಳಲ್ಲಿ ಅಭ್ಯರ್ಥಿಗಳನ್ನು ಕರೆದೊಯ್ದು ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆಸುವಂತಹ ಅಕ್ರಮಗಳು ನಡೆದಿವೆ ಎಂದು ಕಿಡಿಕಾರಿದ ಕುಮಾರಸ್ವಾಮಿ, "ನಾನು ಪ್ರಸ್ತುತ ನಡೆದಿರುವ ಹಗರಣದ ಬಗ್ಗೆ ಮಾತನಾಡುತ್ತಿದ್ದರೆ, ಖರ್ಗೆ ಅವರು ಮುಗಿದುಹೋದ ಹಳೆಯ ವಿಷಯಗಳನ್ನು ಎತ್ತುತ್ತಿದ್ದಾರೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷರನ್ನು ರಾಜಕೀಯ ಸೇಡಿಗಾಗಿ ಬಲಿಪಶು ಮಾಡಲಾಯಿತು. ಹೈಕೋರ್ಟ್ ತೀರ್ಪಿನಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾಗಿಲ್ಲ" ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ವಿರುದ್ಧ ಕಟ್ಟುನಿಟ್ಟಿನ ಆಕ್ಷೇಪ: 2025ರ ಆಯ್ಕೆ ಪ್ರಕ್ರಿಯೆಯಲ್ಲಿ ಕೆಎಟಿ ಮಧ್ಯಂತರ ತಡೆ ನೀಡದಿದ್ದಾಗ, ಹೈಕೋರ್ಟ್ ಕೆಪಿಎಸ್‌ಸಿ ಸಬ್ ಕಮಿಟಿ ತನಿಖೆಯ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕಾತಿ ನಡೆಸಲು ಒಪ್ಪಿಗೆ ನೀಡಿತ್ತು. ಆದರೂ ಅಂದಿನ ಕಾರ್ಯದರ್ಶಿ ಆತುರಾತುರವಾಗಿ ನೇಮಕಾತಿ ಪತ್ರಗಳನ್ನು ನೀಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರ ಈ ಬಗ್ಗೆ ನ್ಯಾಯಾಲಯಕ್ಕೆ ತನ್ನ ಆಕ್ಷೇಪಣೆ ಸಲ್ಲಿಸದೆ ಬೇಕೆಂತಲೇ ದಿನಾಂಕಗಳನ್ನು ಮುಂದೂಡುತ್ತಾ ಪ್ರಕರಣವನ್ನು ಎಳೆದಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪಿಸಿದರು.




