ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಬೇರೂರಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ನಿರ್ಣಾಯಕ ಹೋರಾಟಕ್ಕೆ ಕರೆ ನೀಡಿದ್ದಾರೆ. ಲಕ್ಷಾಂತರ ಯುವಜನತೆಯ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯಲು ಅವರು 'ಮಹಾಸಮರ'ವನ್ನು ಆರಂಭಿಸಿದ್ದಾರೆ.
ಸದನ ಸಮಿತಿಯ ಮೂಲಕ ಸುಧಾರಣೆಗೆ ಒತ್ತಾಯ:
ಪಕ್ಷಾತೀತವಾಗಿ ನಡೆಸಿದ ನಿರಂತರ ಹೋರಾಟದ ಫಲವಾಗಿ, ರಾಜ್ಯ ಸರ್ಕಾರವು ಇಂದು ಕೆಪಿಎಸ್‌ಸಿ ಸುಧಾರಣೆಗಾಗಿ 'ಸದನ ಸಮಿತಿ'ಯನ್ನು ರಚಿಸಿದೆ. ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಸಮಿತಿಯಲ್ಲಿ ಜೆಡಿಎಸ್ ಪಕ್ಷದ ಹಿರಿಯ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಸದಸ್ಯರಾಗಿದ್ದಾರೆ. ಸಮಿತಿಯ ಮೂಲಕ ಅಭ್ಯರ್ಥಿಗಳ ಧ್ವನಿಯನ್ನು ಸದನದಲ್ಲಿ ಗಟ್ಟಿಯಾಗಿ ಮೊಳಗಿಸಲು ನಿಖಿಲ್ ಕುಮಾರಸ್ವಾಮಿ ಸನ್ನದ್ಧರಾಗಿದ್ದಾರೆ.
ಅಭ್ಯರ್ಥಿಗಳ ಸಲಹೆಗೆ ಆಹ್ವಾನ:
ಕೆಪಿಎಸ್‌ಸಿಯಲ್ಲಿನ ಲಂಚಗುಳಿತನ ಮತ್ತು ಅಕ್ರಮಗಳಿಗೆ ಶಾಶ್ವತ ಮುಕ್ತಿ ಹಾಡಿ, ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ಸಾರ್ವಜನಿಕರ ಹಾಗೂ ಅರ್ಹ ಅಭ್ಯರ್ಥಿಗಳ ಸಲಹೆಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಹಕ್ಕೊತ್ತಾಯ ಮತ್ತು ಸುಧಾರಣಾ ಕ್ರಮಗಳನ್ನು tinyurl.com/KPSCSuggestions ಲಿಂಕ್ ಮೂಲಕ ದಾಖಲಿಸಬಹುದಾಗಿದೆ.
ನಿಖಿಲ್ ಕುಮಾರಸ್ವಾಮಿ ಅವರ ಭರವಸೆ:
"ಇದು ಕೇವಲ ಬದಲಾವಣೆಯಲ್ಲ, ಇದೊಂದು ವ್ಯವಸ್ಥೆಯ ಶುದ್ಧೀಕರಣ. ಕೆಪಿಎಸ್‌ಸಿ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಅರ್ಹ ಅಭ್ಯರ್ಥಿಗಳ ಕನಸನ್ನು ಹೊಸಕಿ ಹಾಕುತ್ತಿರುವ ಈ ಕೊಳಕು ವ್ಯವಸ್ಥೆಯನ್ನು ಸರಿಪಡಿಸಲು ನಿಮ್ಮ ಪ್ರತಿಯೊಂದು ದನಿಯನ್ನು ಸಮಿತಿಯ ಅಧ್ಯಕ್ಷರಿಗೆ ತಲುಪಿಸಿ, ತಾರ್ಕಿಕ ಅಂತ್ಯ ಕಾಣಿಸುವ ಹೊಣೆ ನನ್ನದು. ಭ್ರಷ್ಟಾಚಾರ ಮುಕ್ತ ಕರ್ನಾಟಕವೇ ನಮ್ಮ ಸಂಕಲ್ಪ," ಎಂದು ನಿಖಿಲ್ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಜನತೆಯ ಭವಿಷ್ಯಕ್ಕಾಗಿ ನಡೆಸುವ ಈ ಸಮರದಲ್ಲಿ ತಾವು ಯಾವಾಗಲೂ ಮುಂಚೂಣಿಯಲ್ಲಿರುವುದಾಗಿ ಅವರು ಭರವಸೆ ನೀಡಿದ್ದಾರೆ.


