ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜನ್ಮದಿನದ ಆಚರಣೆಗಳು ದುಂದು ವೆಚ್ಚದ ಆಡಂಬರಗಳಂತೆ ಬಿಂಬಿಸುವುದು ಅಷ್ಟು ಸೂಕ್ತವೆನಿಸುವುದಿಲ್ಲ. ವೈಭವದ ಯಾವುದೇ ಆಚರಣೆಗಳು ಸಮಾಜಕ್ಕೆ ಅಷ್ಟು ಸಮಂಜಸವಲ್ಲ ಎಂದು 11ನೇ ವಾರ್ಡ್ ಕರೇನಹಳ್ಳಿ ನಗರಸಭಾ ಸದಸ್ಯ ಚಂದ್ರಮೋಹನ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕರೇನಹಳ್ಳಿ ಕಾಳಿದಾಸ ನಗರದ ಯುವ ಮುಖಂಡ ವಿಜಯ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಬಯಲು ಬಸವಣ್ಣ ದೇವಾಲಯದ ಬಳಿ ಸ್ಪಂದನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಚಂದ್ರಮೋಹನ್ ಮಾತನಾಡಿ ಇಂದು ಹುಟ್ಟುಹಬ್ಬದ ಹೆಸರಿನಲ್ಲಿ ಯುವಜನತೆ ಮೋಜು ಮಸ್ತಿಗೋಸ್ಕರ ದುಂದು ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಯಾರೋ ಬೆರಳೆಣಿಕೆಯ ಮಂದಿಗೆ ಮನರಂಜನೆಯಾಗಬಹುದು.
ಆದರೆ ಸಮಾಜಕ್ಕೆ ಇದರಿಂದ ಯಾವುದೇ ಉಪಯೋಗವಿಲ್ಲ. ನಾಲ್ಕಾರು ಜನರಿಗೆ ಉಪಯೋಗವಾಗುವ ಬದಲು ಅದನ್ನೇ ಸಾರ್ವಜನಿಕರ ಬಡವರಿಗೆ ಅನುಕೂಲವಾಗುವ ಯಾವುದಾದರೊಂದು ಕಾರ್ಯಕ್ರಮ ಮಾಡಿದರೆ ಜನ್ಮದಿನದ ಆಚರಣೆಗೆ ಸಾರ್ಥಕ ಭಾವ ಬರುತ್ತದೆ. ಈ ನಿಟ್ಟಿನಲ್ಲಿ ಕಾಳಿದಾಸ ನಗರದ ಯುವ ಮುಖಂಡ ವಿಜಯ್ ಕುಮಾರ್ ಕರೇನಹಳ್ಳಿ ಹಾಗೂ ಸುತ್ತಲಿನ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಉಚಿತ ಅರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಜನಪರ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಯುವ ಜನತೆ ಇಂಥ ತಮ್ಮ ಯಾವುದೇ ಕಾರ್ಯಕ್ರಮ ವನ್ನು ಜನಸಾಮಾನ್ಯರೊಂದಿಗೆ ಬೆರೆತು ಆಚರಿಸುವುದು ತುಂಬಾ ಅರ್ಥಪೂರ್ಣ ಎನಿಸಿಕೊಳ್ಳುವುದರ ಜೊತೆಗೆ ಬಡವರ್ಗದವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಉಚಿತ ಅರೋಗ್ಯ ಶಿಬಿರದಲ್ಲಿ ಕರೇನಹಳ್ಳಿ ವಿದ್ಯಾನಗರದ ಸಾರ್ವಜನಿಕರು ಭಾಗವಹಿಸಿ ಅರೋಗ್ಯ ತಪಾಸಣೆಯ ಪ್ರಯೋಜನವನ್ನು ಪಡೆದುಕೊಂಡರು. ಅರೋಗ್ಯ ತಪಾಸಣೆಗೆ ಬಂದವರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಡಿಪಿಎ ನಿರ್ದೇಶಕ ರಾಮಣ್ಣ, ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ಸದಸ್ಯ ದ್ರುವಕುಮಾರ್, ನಗರಸಭಾ ಸದಸ್ಯರಾದ ಆನಂದ್, ರೂಪಿಣಿ ಮಂಜುನಾಥ್ ಸೇರಿದಂತೆ ಕರೇನಹಳ್ಳಿ ಭಾಗದ ಹಲವಾರು ಮುಖಂಡರು ಭಾಗವಹಿಸಿ ವಿಜಯ್ ಕುಮಾರ್ ರವರನ್ನು ಅಭಿನಂದಿಸಿದರು.



