ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಭಾಗದಲ್ಲಿ 'ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ (ಟೌನ್‌ಶಿಪ್)' ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಜನತಾದಳ (ಜಾತ್ಯತೀತ) ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ರೈತ ವಿರೋಧಿ ಮತ್ತು ಸರ್ವಾಧಿಕಾರಿ ಧೋರಣೆ ಎಂದು ಜೆಡಿಎಸ್ ಕಟುವಾಗಿ ಟೀಕಿಸಿದೆ.
'ಹಸಿರು ಮಲೆನಾಡು' ಬರಡು ಭೂಮಿಯಲ್ಲ: ಬೆಂಗಳೂರಿಗೆ ಪ್ರತಿ ತಿಂಗಳು ಭಾರಿ ಪ್ರಮಾಣದಲ್ಲಿ ಅಂದರೆ, 6 ಲಕ್ಷ ಲೀಟರ್ ಹಾಲು, ಲಕ್ಷಾಂತರ ತೆಂಗಿನಕಾಯಿ ಹಾಗೂ ತರಕಾರಿಯನ್ನು ಪೂರೈಸುವ ಬಿಡದಿ ಭಾಗವು ಬಿಲಾರಸ್ ಅಥವಾ ಬರಡು ಭೂಮಿಯಲ್ಲ, ಅದು 'ಹಸಿರು ಮಲೆನಾಡು' ಎಂದು ಜೆಡಿಎಸ್ ಬಣ್ಣಿಸಿದೆ.
ಮಣ್ಣನ್ನು ಬಿಟ್ಟುಕೊಡಲ್ಲ ಎಂದ ರೈತರು: "100 ಕೋಟಿ ರೂಪಾಯಿ ಕೊಟ್ಟರೂ ನಮ್ಮ ಹೆತ್ತವರ ಸಮಾಧಿಗಳಿರುವ ಈ ಪವಿತ್ರ ಮಣ್ಣನ್ನು ನಾವು ಬಿಟ್ಟುಕೊಡುವುದಿಲ್ಲ" ಎಂದು ಸ್ಥಳೀಯ ರೈತರು ಪಟ್ಟು ಹಿಡಿದಿದ್ದಾರೆ ಎಂದು ಜೆಡಿಎಸ್ ಹೇಳಿದೆ.
ಸರ್ಕಾರಕ್ಕೆ ನೇರ ಎಚ್ಚರಿಕೆ: "ರೈತರ ಕಣ್ಣೀರಿನ ಶಾಪ ಯಾವುದೇ ದಬ್ಬಾಳಿಕೆಯ ಸರ್ಕಾರವನ್ನು ಸುಟ್ಟು ಭಸ್ಮ ಮಾಡುತ್ತದೆ" ಎಂದು ಎಚ್ಚರಿಸಿರುವ ಪಕ್ಷವು, ಟೌನ್‌ಶಿಪ್ ಹೆಸರಿನಲ್ಲಿ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಸರ್ಕಾರ ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಜೆಡಿಎಸ್ ಸಂಪೂರ್ಣ ಬೆಂಬಲ: ʼರೈತರ ಮೇಲೇಕೆ ಗಧಾ ಪ್ರಹಾರ' ಎಂಬ ಅನ್ನದಾತನ ಆಕ್ರೋಶದ ನುಡಿಗಳಿಗೆ ರಾಜ್ಯ ಸರ್ಕಾರ ತಕ್ಷಣ ಉತ್ತರಿಸಬೇಕು ಎಂದು ಒತ್ತಾಯಿಸಿರುವ ಜೆಡಿಎಸ್, ರೈತರ ಫಲವತ್ತಾದ ಕೃಷಿಭೂಮಿ ಉಳಿಸುವ ಈ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ಪ್ರಕಟಿಸಿದೆ.
ಬಿಡದಿ ಭಾಗದ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಗೆ ರೈತರಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಜೆಡಿಎಸ್ ಪಕ್ಷವು ರೈತರ ಪರವಾಗಿ ನಿಂತು ಸರ್ಕಾರದ ವಿರುದ್ಧ ಹೋರಾಟಕ್ಕೆ ಧುಮುಕಿದೆ.



